ಭಾರತದಲ್ಲಿ ನಡೆಸಿದ ತನಿಖೆಗಳು

ನಾಚಿ ಅಪಾರೆಲ್

ಈ ಕಾರ್ಖಾನೆಯಲ್ಲಿ ಲಿಂಗಾಧಾರಿತ ದೌರ್ಜನ್ಯ, ಕಿರುಕುಳ, ಶೋಷಣೆ ಮತ್ತು ಸಂಘಟನಾ ಸ್ವಾಂತಂತ್ರ್ಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕಾನೂನುಗಳು, ಅಂತಾರಾಷ್ಟ್ರೀಯ ಕಾರ್ಮಿಕ ಮಾನಕಗಳು ಮತ್ತು ಬ್ರಾಂಡ್‍ಗಳ ಕೋಡ್‍ಆಫ್ ಕಾಂಡಕ್ಟ್‍ಗಳು ಉಲ್ಲಂಘನೆಯಾಗುತ್ತಿದ್ದವು. ಇಂತಹ ಹಲವಾರು ಘಟನೆಗಳು WRC ಯ ಗಮನಕ್ಕೆ ಬಂದ ನಂತರವೇ ಲಿಂಗಾಧಾರಿತ ತಾರತಮ್ಯ ಮತ್ತು ಕಿರುಕುಳಗಳ ನಿಷೇಧಕ್ಕಾಗಿ ನಾಚಿ ಅಪಾರೆಲ್ ಕಾರ್ಖಾನೆಯ ಮಾಲೀಕರಾದ ಈಸ್ಟ್‍ಮ್ಯಾನ್ ಅಪಾರೆಲ್ ಮತ್ತು H&M ಜೊತೆಯಲ್ಲಿ ಕಾರ್ಮಿಕ ಸಂಘಟನೆಗಳು ಒಂದು ಒಪ್ಪಂದಕ್ಕೆ ಸಹಿ ಹಾಕಿವೆ.

 

ಟೆಕ್ಸ್‍ಪೋಟ್ರ್ಸ್ ಕ್ರಿಯೇಶನ್ಸ್

ಗಾರ್ಮೆಂಟ್ ಉದ್ಯಮದಲ್ಲಿ ನೀಡುವ ಅತ್ಯಂತ ಕಡಿಮೆ ವೇತನದಿಂದ ಬಹುತೇಕ ಗಾರ್ಮೆಂಟ್ಸ್ ಕಾರ್ಮಿಕರು ಕೋವಿಡ್-19 ರ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಉಳಿತಾಯವೂ ಇಲ್ಲದೆ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದರು. ಗಾರ್ಮೆಂಟ್ಸ್ ಉತ್ಪಾದಿಸುವ ಬಹುತೇಕ ದೇಶಗಳು, ಕೋವಿಡ್‍ನಿಂದ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಯಾವ ನಿರುದ್ಯೋಗ ಭತ್ಯೆಯನ್ನೂ ನೀಡಲಿಲ್ಲ, ಕೆಲವು ನೀಡಿದರೂ ಅದು ಅತ್ಯಲ್ಪ ಮಟ್ಟದಲ್ಲಿ ಅಷ್ಟೇ. ಈ ಸಮಯದಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಇದ್ದ ಭರವಸೆ ಎಂದರೆ ತಮ್ಮನ್ನು ಕೆಲಸದಿಂದ ತೆಗೆದುಹಾಕಿದಾಗ ಮಾಲೀಕರು ತಮಗೆ ನೀಡಬೇಕಾಗಿದ್ದ ಕಾನೂನುಬದ್ಧ ಪರಿಹಾರದ ಮೊತ್ತ ಅಷ್ಟೇ.

WRC ಯು ಅಧ್ಯಯನ ನಡೆಸಿದಾಗ ಕಂಡು ಬಂದದ್ದೇನೆಂದರೆ, ಕೋವಿಡ್ ಸಂದರ್ಭದಲ್ಲಿ ಕೆಲಸದಿಂದ ತೆಗೆದುಹಾಕಿದ ಕಾರ್ಮಿಕರಿಗೆ ಕಾನೂನು ಬದ್ಧ ಪರಿಹಾರ ನೀಡುವುದನ್ನು ಮಾಲೀಕರು ನಿರಾಕರಿಸಿದ್ದರು.  ಇದು ಸ್ಥಳೀಯ ಕಾನೂನಿನ ಉಲ್ಲಂಘನೆಯಾಗಿತ್ತು ಮತ್ತು ಈ ಕಾರ್ಮಿಕರು ಹೊಲೆಯುತ್ತಿದ್ದ ಬ್ರಾಂಡ್ ಹಾಗೂ ರೀಟೇಲರ್‍ಗಳ ಕಾರ್ಮಿಕ ಬದ್ಧತೆಯ ನಿಯಮಗಳಿಗೂ ವಿರುದ್ಧವಾಗಿತ್ತು.

ಕೋವಿಡ್ 19 ರ ಸಂದರ್ಭದಲ್ಲಿ WRC ಯು ಹೊರತಂದ ವರದಿ ಫೈರ್ಡ್, ದೆನ್ ರಾಬಡ್: ಫ್ಯಾಷನ್ ಬ್ರಾಂಡ್ಸ್ ಕಾಂಪ್ಲಿಸಿಟಿ ಇನ್ ವೇಜ್ ಥೆಫ್ಟ್ ಡ್ಯೂರಿಂಗ್ ಕೋವಿಡ್-19” ಯಲ್ಲಿ ಕಾರ್ಮಿಕರಿಗೆ ಕೆಲಸ ನಿರಾಕರಿಸಿದ, ಅವರ ವೇತನವನ್ನು ಕಳ್ಳತನ ಮಾಡಿದ 31 ಕಾರ್ಖಾನೆಗಳಲ್ಲಿ ಟೆಕ್ಸ್‍ಪೋರ್ಟ್ ಕ್ರಿಯೇಶನ್ ಸಹ ಒಂದಾಗಿತ್ತು. ಕೋವಿಡ್ ಸಮಯದಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ ಈ ಕಂಪನಿಯು ಇನ್ನೂ ಸಹ ಅಂದರೆ ಏಪ್ರಿಲ್ 2021 ಆದರೂ ಕಾರ್ಮಿಕರಿಗೆ ಕಾನೂನುಬದ್ಧ ಪರಿಹಾರವನ್ನು ಕೊಟ್ಟಿಲ್ಲ.

ಮೇ 2020 ರಲ್ಲಿ ಟೆಕ್ಸ್‍ಪೋರ್ಟ್ ಕ್ರಿಯೇಶನ್ ಕಂಪನಿಯು ಮುಚ್ಚುವ ಮೂಲಕ, 750 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿತ್ತು. ಏಪ್ರಿಲ್ 2021ರ ಹೊತ್ತಿಗೂ ಈ ಕಾರ್ಮಿಕರು ತಮಗೆ ಬರಬೇಕಾದ $216,334  ನಷ್ಟು ಮೊತ್ತದ ಕಾನೂನು ಬದ್ಧ ಪರಿಹಾರಕ್ಕೆ ಕಾಯುತ್ತಲೇ ಇದ್ದರು.

ಟೆಕ್ಸ್‍ಪೋರ್ಟ್ ಕ್ರಿಯೇಶನ್ಸ್, ಭಾರತದಲ್ಲಿ ಬೆಂಗಳೂರಿನ ಮೈಸೂರು ರಸ್ತೆಯ ರಾಜರಾಜೇಶ್ವರಿನಗರದ ಕೆಂಚೇನಹಳ್ಳಿಯ ಇಂಡಸ್ಟ್ರಿಯಲ್ ಎಸ್ಟೇಟ್, ನಂ 26/1, A2, 26/1, B2,ಇಲ್ಲಿ ನೆಲೆಯಾಗಿರುವ ಕಾರ್ಖಾನೆಯಾಗಿದೆ. ಅಂತಾರಾಷ್ಟ್ರೀಯ ಬ್ರಾಂಡ್ ಗ್ಯಾಪ್, ಜನವರಿ 2021 ರಲ್ಲಿ WRC ಗೆ ಬರೆದ ಪತ್ರದಲ್ಲಿ ಟೆಕ್ಸ್‍ಪೋಟ್ರ್ಸ್ ಕ್ರಿಯೇಶನ್ ಮಾಲೀಕರು ಕಾರ್ಮಿಕರಿಗೆ ಕಾರ್ಖಾನೆ ಮುಚ್ಚುವ ಪರಿಹಾರ ನೀಡಿರುವುದಾಗಿಯೂ, ಅದಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ತಾವು ಪರಿಶೀಲಿಸಿದ್ದಾಗಿಯೂ ದೃಢಪಡಿಸಿ, ಆ ಕಾರ್ಮಿಕರಿಗೆ ಏನೇನು ಬಾಕಿ ಬರಬೇಕಿತ್ತೋ ಅವೆಲ್ಲವೂ ಸಿಕ್ಕಿದೆ ಎಂದು ಪ್ರಕರಣವನ್ನು ಮುಗಿಸಿತ್ತು. ಆದರೆ ಈ ಕಾರ್ಮಿಕರಿಗೆ ಅವರಿಗೆ ಬರಬೇಕಾದ ಬಾಕಿ ಮಾತ್ರ ಸಿಕ್ಕಿದ್ದು ಮುಚ್ಚುವ ಪರಿಹಾರ ಸಿಕ್ಕಿಲ್ಲ ಎಂದು ಸಾಕ್ಷ್ಯಗಳು ದೃಢಪಡಿಸುತ್ತವೆ.

 

ಗಾರ್ಡನ್ ಸಿಟಿ ಫ್ಯಾಷನ್ಸ್

ಗಾರ್ಮೆಂಟ್ ಉದ್ಯಮದಲ್ಲಿ ನೀಡುವ ಅತ್ಯಂತ ಕಡಿಮೆ ವೇತನದಿಂದ ಬಹುತೇಕ ಗಾರ್ಮೆಂಟ್ಸ್ ಕಾರ್ಮಿಕರು ಕೋವಿಡ್-19 ರ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಉಳಿತಾಯವೂ ಇಲ್ಲದೆ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದರು. ಗಾರ್ಮೆಂಟ್ಸ್ ಉತ್ಪಾದಿಸುವ ಬಹುತೇಕ ದೇಶಗಳು, ಕೋವಿಡ್‍ನಿಂದ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಯಾವ ನಿರುದ್ಯೋಗ ಭತ್ಯೆಯನ್ನೂ ನೀಡಲಿಲ್ಲ, ಕೆಲವು ನೀಡಿದರು ಅದು ಅತ್ಯಲ್ಪ ಮಟ್ಟದಲ್ಲಿ ಅಷ್ಟೇ. ಈ ಸಮಯದಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಇದ್ದ ಭರವಸೆ ಎಂದರೆ ತಮ್ಮನ್ನು ಕೆಲಸದಿಂದ ತೆಗೆದುಹಾಕಿದಾಗ ಮಾಲೀಕರು ತಮಗೆ ನೀಡಬೇಕಾಗಿದ್ದ ಕಾನೂನುಬದ್ಧ ಪರಿಹಾರದ ಮೊತ್ತ ಅಷ್ಟೇ.

WRC ಯು ಅಧ್ಯಯನ ನಡೆಸಿದಾಗ ಕಂಡು ಬಂದದ್ದೇನೆಂದರೆ, ಕೋವಿಡ್ ಸಂದರ್ಭದಲ್ಲಿ ಕೆಲಸದಿಂದ ತೆಗೆದುಹಾಕಿದ ಕಾರ್ಮಿಕರಿಗೆ ಕಾನೂನು ಬದ್ಧ ಪರಿಹಾರ ನೀಡುವುದನ್ನು ಮಾಲೀಕರು ನಿರಾಕರಿಸಿದ್ದರು.  ಇದು ಸ್ಥಳೀಯ ಕಾನೂನಿನ ಉಲ್ಲಂಘನೆಯಾಗಿತ್ತು ಮತ್ತು ಈ ಕಾರ್ಮಿಕರು ಹೊಲೆಯುತ್ತಿದ್ದ ಬ್ರಾಂಡ್ ಹಾಗೂ ರೀಟೇಲರ್‍ಗಳ ಕಾರ್ಮಿಕ ಬದ್ಧತೆಯ ನಿಯಮಗಳಿಗೆ ವಿರುದ್ಧವಾಗಿತ್ತು.

ಕೋವಿಡ್ 19 ರ ಸಂದರ್ಭದಲ್ಲಿ WRC ಯು ಹೊರತಂದ ವರದಿ ಫೈರ್ಡ್, ದೆನ್ ರಾಬಡ್: ಫ್ಯಾಷನ್ ಬ್ರಾಂಡ್ಸ್ ಕಾಂಪ್ಲಿಸಿಟಿ ಇನ್ ವೇಜ್ ಥೆಫ್ಟ್ ಡ್ಯೂರಿಂಗ್ ಕೋವಿಡ್-19” ಯಲ್ಲಿ ಕಾರ್ಮಿಕರಿಗೆ ಕೆಲಸ ನಿರಾಕರಿಸಿದ, ಅವರ ವೇತನವನ್ನು ಕಳ್ಳತನ ಮಾಡಿದ 31 ಕಾರ್ಖಾನೆಗಳಲ್ಲಿ ಗಾರ್ಡನ್ ಸಿಟಿ ಫ್ಯಾಶನ್ಸ್ ಸಹ ಒಂದಾಗಿತ್ತು. ಕೋವಿಡ್ ಸಮಯದಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ ಈ ಕಂಪನಿಯು ಇನ್ನೂ ಸಹ ಅಂದರೆ ಏಪ್ರಿಲ್ 2021 ಆದರೂ ಕಾರ್ಮಿಕರಿಗೆ ಕಾನೂನುಬದ್ಧ ಪರಿಹಾರವನ್ನು ಕೊಟ್ಟಿಲ್ಲ.

ಮೇ 2020 ರಲ್ಲಿ ಗಾರ್ಡನ್ ಸಿಟಿ ಫ್ಯಾಶನ್ ಕಂಪನಿಯು ಮುಚ್ಚುವ ಮೂಲಕ, 4500 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿತ್ತು. ಏಪ್ರಿಲ್ 2021ರಲ್ಲೂ ಈ ಕಾರ್ಮಿಕರು ತಮಗೆ ಬರಬೇಕಾದ $778, 803  ನಷ್ಟು ಮೊತ್ತದ ಕಾನೂನು ಬದ್ಧ ಪರಿಹಾರಕ್ಕೆ ಕಾಯುತ್ತಲೇ ಇದ್ದರು.

ಗಾರ್ಡನ್ ಸಿಟಿ ಫ್ಯಾಷನ್ಸ್ ಕಂಪನಿಯು ಭಾರತದ ಬೆಂಗಳೂರಿನಲ್ಲಿರುವ ಯಶವಂತ ಪುರದ ಇಂಡಸ್ಟ್ರಿಯಲ್ ಸಬರ್ಬ್‍ನ ನಂ 84 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಮಿಕರು C&A ಮತ್ತು JC Penney ಬ್ರಾಂಡ್‍ಗಳಿಗೆ ಉಡುಪು ತಯಾರಿಸುತ್ತಿದ್ದರೆಂದು ಗಾರ್ಮೆಂಟ್ ಅಂಡ್ ಟೆಕ್ಸ್‍ಟೈಲ್ ವರ್ಕರ್ಸ್ ಯೂನಿಯನ್ (GATWU) WRC ಗೆ ಮಾಹಿತಿ ನೀಡಿತ್ತು. C&A ಯು ಏಪ್ರಿಲ್ 2020 ರಲ್ಲಿ ತನ್ನ ಸಪ್ಲೈಯರ್‍ಗಳನ್ನು ಅನಾವರಣ ಗೊಳಿಸಿದಾಗ ಅದರಲ್ಲಿ ಗಾರ್ಡನ್ ಸಿಟಿ ಫ್ಯಾಷನ್ ಯೂನಿಟ್ II, III, IV ಮತ್ತು V ಗಳು ಇದ್ದವೆಂದು ಹೇಳಿದೆ. Guess ಬ್ರಾಂಡ್‍ನ ಆಮದು ದಾಖಲೆಯಲ್ಲಿ ಏಪ್ರಿಲ್ 2020 ರಲ್ಲಿ ಅವರು ಗಾರ್ಡನ್ ಸಿಟಿ ಕಾರ್ಖಾನೆಯಿಂದ ಶಿಪ್‍ಮೆಂಟ್ ತರಿಸಿಕೊಂಡಿರುವುದಾಗಿ ಹೇಳಲಾಗಿದೆ. ಗಾರ್ಡನ್ ಸಿಟಿ ಫ್ಯಾಶನ್ ಕಂಪನಿಯು C&A, Guess, Debenhams, Cecil, Next, Forever 21, Esprit, Mufti ಮತ್ತು Dunnes Stores ಮುಂತಾದುವುಗಳು ತನ್ನ ಪ್ರಮುಖ ಭಾಗಿದಾರರು ಎಂದು ಹೇಳಿದೆ.

 

ಡ್ರೆಸ್ ಮಾಸ್ಟರ್ ಅಪಾರೆಲ್ ಪ್ರೈ ಲಿ.

ಡ್ರೆಸ್ ಮಾಸ್ಟರ್ ಅಪಾರೆಲ್ ಪ್ರೈ ಲಿ. ಕಂಪನಿಯು ಗ್ಯಾಪ್ ಬ್ರಾಂಡ್‍ಗೆ ಉತ್ಪಾದನೆ ನಡೆಸುತ್ತಿದ್ದು ಮೇ 2020 ರಲ್ಲಿ ಮುಚ್ಚಿತು. ಈ ಮೂಲಕ ತನ್ನ 1200 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ್ದಲ್ಲದೆ, ಅವರಿಗೆ ಕಾನೂನು ಬದ್ಧವಾಗಿ ನೀಡಬೇಕಾದ ಪರಿಹಾರ ಮೊತ್ತ $ 346,134 ನ್ನು ವಂಚಿಸಿದೆ. ಈ ಕಂಪನಿಯು ಭಾರತದ ಮೂಲಕ ಕಂಪನಿಯಾದ ರೇಮಂಡ್ಸ್ ಲಿ. ನ ಭಾಗವಾಗಿದೆ. ರೇಮಂಡ್ಸ್ ಲಿ. ತನ್ನದೇ ಸ್ವಂತ ಮೂರು ಬ್ರಾಂಡ್‍ಗಳನ್ನು ಹೊಂದಿದೆ ಮತ್ತು ಇನ್ನಿತರ 5 ಬ್ರಾಂಡ್‍ಗಳಿಗೆ ಸಬ್ಸಿಡಯರಿಯಾಗಿ ಕೆಲಸ ಮಾಡುತ್ತಿದೆ.

ಫ್ಯಾಕ್ಟರಿಗೆ ಆರ್ಡರ್ ಇಲ್ಲ ಆದ್ದರಿಂದ ರಾಜೀನಾಮೆ ಕೊಟ್ಟು ಹೋಗಬಹುದು ಎಂದು ಕಾರ್ಮಿಕರಿಗೆ ಪುಸಲಾಯಿಸಿದ ಎರಡು ತಿಂಗಳ ಹಿಂದೆಯೇ ಆಡಳಿತವರ್ಗದವರು ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಾರಂಭಿಸಿದ್ದರು ಎಂದು ಕಾರ್ಮಿಕರು ಹೇಳಿಕೆ ನೀಡಿದ್ದಾರೆ. ಸರ್ಕಾರ ಕಡ್ಡಾಯ ಲಾಕ್‍ಡೌನ್ ಘೋಷಿಸಿದ್ದರಿಂದ 2020 ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕಂಪನಿಯು ಬಹುತೇಕ ಮುಚ್ಚಿತ್ತು. ಕೆಲವೇ ಕಾರ್ಮಿಕರನ್ನು ಇಟ್ಟುಕೊಂಡು ಮಾಸ್ಕ್ ಹೊಲೆದಿತ್ತು. ಮೇ 17 ರಂದು ಕಂಪನಿಯು ಮತ್ತೆ ಶುರುವಾದಾಗ ಅರ್ಧದಷ್ಟು ಕಾರ್ಮಿಕರನ್ನು ಮಾತ್ರವೇ ಕೆಲಸಕ್ಕೆ ಕರೆಯಿತು. ಜೂನ್ 2020 ರ ಹೊತ್ತಿಗೆ ಆರ್ಡರ್ ಇಲ್ಲದಿರುವುದರಿಂದ ಕಂಪನಿಯನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಗಿದೆ, ಮತ್ತೆ ತೆರೆದಾಗ ನಿಮ್ಮನ್ನೇ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಕಾರ್ಮಿಕರಿಗೆ ತಿಳಿಸಲಾಯಿತು. ನಂತರ 9 ತಿಂಗಳಾದರೂ ಕಂಪನಿ ತೆರೆಯಲಿಲ್ಲ, ಕಾರ್ಮಿಕರಿಗೆ ಅವರ ಬೋನಸ್ ಮತ್ತು ರಜೆಯ ಹಣದಂತಹ ಕಾನೂನುಬದ್ಧ ಬಾಕಿ ಬಿಟ್ಟರೆ ಯಾವ ಪರಿಹಾರವನ್ನೂ ನೀಡಲಿಲ್ಲ.

ಡ್ರೆಸ್ ಮಾಸ್ಟರ್ ಕಂಪನಿಯು ಕಾರ್ಮಿಕರಿಗೆ ಕೊಡಬೇಕಾಗಿದ್ದನ್ನೆಲ್ಲ ಕೊಟ್ಟಿದೆ ಎಂದು ಗ್ಯಾಪ್ ಹೇಳುತ್ತಿದೆ. ಆದರೆ ಕಾರ್ಮಿಕರಿಗೆ ಒಂದು ರೂಪಾಯಿಯ ಪರಿಹಾರವೂ ಸಿಕ್ಕಿಲ್ಲ ಎಂದು ಕಾರ್ಮಿಕ ಪ್ರತಿನಿಧಿಗಳು ಹೇಳುತ್ತಲೇ ಇದ್ದಾರೆ. ಡ್ರೆಸ್ ಮಾಸ್ಟರ್ ಕಂಪನಿಯ ಮಾಲೀಕರು ಗ್ಯಾಪ್‍ಗೆ ಸುಳ್ಳು ಮಾಹಿತಿ ನೀಡಿದೆ ಎಂದು WRC ಯು ಇದರಿಂದ ತೀರ್ಮಾನಕ್ಕೆ ಬಂದಿದೆ.

 

ಏವರಿ ಡೆನಿಸನ್

ಏವರಿ ಡೆನಿಸನ್ ಕಂಪನಿಯ ಕಾರ್ಮಿಕರು ಬೆಂಗಳೂರು ಮೂಲದ ಗಾರ್ಮೆಂಟ್ ಅಂಡ್ ಟೆಕ್ಸ್‍ಟೈಲ್ ವರ್ಕರ್ಸ್ ಯೂನಿಯನ್ (GATWU) ಮೂಲಕ ಸಂಘಟಿತರಾಗಿ ತಮ್ಮನ್ನು ಅಧಿಕೃತ ಕಾರ್ಮಿಕ ಪ್ರತಿನಿಧಿಗಳನ್ನಾಗಿ ಪರಿಗಣಿಸಬೇಕೆಂದು ಕೇಳಿದಾಗ ಆಡಳಿತವರ್ಗವು ಅವರ ಮೇಲೆ ನಡೆಸಿದ ದೌರ್ಜನ್ಯ ಮತ್ತು ಅನ್ಯಾಯಗಳ ವಿಷಯವಾಗಿ WRC ಯು ತನಿಖೆ ನಡೆಸಿತ್ತು. ವರದಿಯಲ್ಲಿ ವಿವರವಾಗಿ ತಿಳಿಸಿದಂತೆ ಏವರಿ ಡೆನಿಸನ್ ಕಂಪನಿಯು ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ಕಾರ್ಮಿಕರ ಸಂಘಟನಾ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಿತ್ತು.

  • ಕಾರ್ಖಾನೆಯಲ್ಲಿ ಅಸ್ತಿತ್ವದಲ್ಲಿದ್ದ ಮ್ಯಾನೇಜ್‍ಮೆಂಟ್ ಪರ ಯೂನಿಯನ್‍ನ ಮುಖಂಡರಿಗೆ ಅಕ್ರಮ ರೀತಿಯಲ್ಲಿ ಹಣ ಪಾವತಿಸಿದ್ದು ಮತ್ತು GATWU ಮೂಲಕ ಪ್ರಾತಿನಿಧಿತ್ವ ಬಯಸಿದ್ದ ಕಾರ್ಮಿಕರ ಪ್ರಯತ್ನಗಳ ವಿರುದ್ಧ ಇನ್ನೊಂದು ಯೂನಿಯನ್‍ನ ಸದಸ್ಯರನ್ನು ಎತ್ತಿಕಟ್ಟಿದ್ದು.
  • GATWU ಬೆಂಬಲ ಸದಸ್ಯರಿಗೆ ಇನ್ನೊಂದು ಯೂನಿಯನ್‍ನ ಸದಸ್ಯರು ಕಾರ್ಖಾನೆಯಲ್ಲಿ ದೈಹಿಕ ಹಲ್ಲೆ ನಡೆಸಲು ಅನುಮತಿ ನೀಡಿದ್ದು, ಜೊತೆಗೆ ಅವರ ಮೇಲೆ ದೌರ್ಜನ್ಯ, ಅಪರಾಧ ಎಸಗಲು ಅವಕಾಶಕೊಟ್ಟಿದ್ದು ಮತ್ತು ಮನೆಗಳನ್ನು ತೆರವುಗೊಳಿಸುತ್ತೇವೆಂದು ಬೆದರಿಕೆ ಒಡ್ಡಲು ಅವಕಾಶ ನೀಡಿದ್ದು;
  • ಕಾರ್ಮಿಕರ ಶಾಂತಿಯುತ ಸಂಘಟನಾ ಚಟುವಟಿಕೆಗಳ ಮೇಲೆ ಬೆದರಿಕೆ ಒಡ್ಡುವ ರೀತಿಯಲ್ಲಿ ಅಕ್ರಮವಾಗಿ ಕಣ್ಗಾವಲಿಟ್ಟಿದ್ದು.

ಈ ವರದಿಯನ್ನು WRC ಯು, ಏವರಿಡೆನಿಸನ್ ಕಂಪನಿ, ಕೊಲಂಬಿಯಾ (ಕಾಲೇಜ್ ಲೈಸೆನ್ಸ್ ಪಡೆದ ಬ್ರಾಂಡ್) ಮತ್ತು ಇತರ ಬ್ರಾಂಡ್‍ಗಳೊಂದಿಗೆ ಹಂಚಿಕೊಂಡಿತು. ನಂತರ ಏವರಿಡೆನಿಸನ್ WRC ಯನ್ನು ಸಂಪರ್ಕಿಸಿ ತನ್ನ ನಡವಳಿಕೆಯನ್ನು ತಿದ್ದಿಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿತು. ಕೊನೆಗೆ ಕಾರ್ಖಾನೆಯಲ್ಲಿ ಅಸ್ತಿತ್ವದಲ್ಲಿದ್ದ ಯೂನಿಯನ್ ಜೊತೆಗೆ GATWU ವನ್ನೂ ಕಾರ್ಮಿಕರ ಪ್ರತಿನಿಧಿಯನ್ನಾಗಿ ಮಾನ್ಯಮಾಡಿತು. ಎರಡೂ ಯೂನಿಯನ್‍ಗಳ ಆಯ್ದ ಸದಸ್ಯರ ಜಂಟಿ ಸಮಿತಿಯೊಂದಿಗೆ ಸಾಮೂಹಿಕ ಚೌಕಾಸಿ ನಡೆಸಿ ಹೊಸ ವೇತನ ಒಪ್ಪಂದ ಮಾಡಿಕೊಂಡಿತು. ಈ ವೇತನ ಒಪ್ಪಂದದಲ್ಲಿ ಕಾರ್ಮಿಕರ ವೇತನ ಹಾಗೂ ಇನ್ನಿತರ ಸೌಲಭ್ಯಗಳಲ್ಲಿ ಗಣನೀಯ ಸುಧಾರಣೆ ಕಂಡಿದೆ.

 

ಶಾಹಿ ಎಕ್ಸ್‍ಪೋಟ್ರ್ಸ್ ಪ್ರೈ ಲಿ.

ಭಾರತದಲ್ಲಿ ಬೆಂಗಳೂರಿನಲ್ಲಿರುವ ಶಾಹಿ ಎಕ್ಸ್‍ಪೋಟ್ರ್ಸ್ ಪ್ರೈ ಲಿ. ನ ಯೂನಿಟ್ 8 ರಲ್ಲಿ ಕಾರ್ಮಿಕರು ತಮ್ಮ ಮೂಲಭೂತ ಕಾರ್ಮಿಕ ಹಕ್ಕುಗಳನ್ನು ಚಲಾಯಿಸಲು ಯತ್ನಿಸಿದಾಗ ಆಡಳಿತವರ್ಗವು ಅದನ್ನು ದಮನ ಮಾಡಲು ಅನೇಕ ಕ್ರಮಗಳನ್ನು ಅನುಸರಿಸಿದ್ದು WRC ಯು ನಡೆಸಿದ ತನಿಖೆಯಿಂದ ತಿಳಿದು ಬಂದಿತು. ಉತ್ತಮ ಕೆಲಸದ ವಾತಾವರಣವನ್ನು ಆಗ್ರಹಿಸಿ ಈ ಕಾರ್ಖಾನೆಯ ಕಾರ್ಮಿಕರು ಕರ್ನಾಟಕ ಗಾರ್ಮೆಂಟ್ ವರ್ಕರ್ಸ್ ಯೂನಿಯನ್ (KOOGU) ಮೂಲಕ ಸಂಘಟಿತರಾಗಿದ್ದರು. ಪರಿಣಾಮವಾಗಿ ಆಡಳಿತವರ್ಗವು ಅವರ ವಿರುದ್ಧ ದಮನಕಾರೀ ಕ್ರಮಗಳನ್ನು ಅನುಸರಿಸಿತ್ತು. ಈ ಕಾರ್ಖಾನೆಯು ಯೂನಿವಿರ್ಸಿಟಿ ಲೋಗೋಗಳನ್ನು ಒಳಗೊಂಡ ಬಟ್ಟೆಗಳನ್ನು ಕೊಲಂಬಿಯ ಸ್ಪೋಟ್ರ್ಸ್‍ವೇರ್, ಮತ್ತು Benetton, H&M, ಮತ್ತು Abercrombie & Fitch ಗಳಿಗೆ ಉತ್ಪಾದಿಸುತ್ತಿತ್ತು.

ಶಾಹಿಯು ಅಹುಜಾ ಕುಟುಂಬಕ್ಕೆ ಸೇರಿದ್ದು, ಭಾರತದ ಅತಿ ದೊಡ್ಡ ಗಾರ್ಮೆಂಟ್ ಉತ್ಪಾದಕ ಕಂಪನಿಯಾಗಿದೆ. 2018 ರಲ್ಲಿ ಕರ್ನಾಟಕದ ಗಾರ್ಮೆಂಟ್ಸ್ ಉದ್ಯಮಕ್ಕೆ ಸರ್ಕಾರವು ಪರಿಷ್ಕರಿಸಿ ಹೆಚ್ಚಿಸಿದ್ದ ಕನಿಷ್ಠವೇತನವನ್ನು ರದ್ದುಗೊಳಿಸುವಲ್ಲಿ ಈ ಕಂಪನಿಯು ಅತ್ಯಂತ ಯಶಸ್ವಿಯಾಗಿ ಲಾಬಿ ಮಾಡಿತ್ತು. 2018 ರ ಏಪ್ರಿಲ್‍ನಲ್ಲಿ WRC ಯು ಶಾಹಿ ಯೂನಿಟ್ 8 ರಲ್ಲಿ ತನಿಖೆಯನ್ನು ನಡೆಸಿತ್ತು. ಅದರ ಭಾಗವಾಗಿ ಸುಮಾರು 30 ಕಾರ್ಮಿಕರ ಸಂದರ್ಶನ ನಡೆಸಿತ್ತು. ಈ ತನಿಖೆಯಿಂದ ಶಾಹಿ ಎಕ್ಸ್‍ಪೋಟ್ರ್ಸ್, ಭಾರತದ ಕಾನೂನು, ಅಂತಾರಾಷ್ಟ್ರೀಯ ಕಾರ್ಮಿಕ ಮಾನಕಗಳನ್ನು ಉಲ್ಲಂಘಿಸಿದ್ದಲ್ಲದೆ ಯೂನಿವರ್ಸಿಟಿ ಮತ್ತು ಬ್ರಾಂಡ್‍ಗಳ ಕೋಡ್ ಆಫ್ ಕಾಂಡಕ್ಟ್‍ಗಳನ್ನೂ ಉಲ್ಲಂಘಿಸಿರುವುದು WRC ಗೆ ಕಂಡು ಬಂದಿತು. ಕಾರ್ಮಿಕರಿಗೆ ದೈಹಿಕವಾಗಿ ಹೊಡೆದಿದ್ದು, ಕೊಲೆ ಬೆದರಿಕೆ ಒಡ್ಡಿದ್ದು, ಲಿಂಗ, ಜಾತಿ ಮತ್ತು ಧರ್ಮಾಧಾರಿತ ತಾರತಮ್ಯ ಎಸಗಿದ್ದು, ಕಾರ್ಮಿಕರನ್ನು ಸಾಮೂಹಿಕವಾಗಿ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದು, ಜೊತೆಗೆ 15 ಕಾರ್ಮಿಕ ಕಾರ್ಯಕರ್ತರನ್ನು ಕೆಲಸದಿಂದ ತೆಗೆದುಹಾಕಿದ್ದು, ಈ ಎಲ್ಲ ಅನ್ಯಾಯದ ಕ್ರಮಗಳನ್ನು ಅನುಸರಿಸುವ ಮೂಲಕ ಶಾಹಿಯು ಕಾನೂನುಗಳ ಉಲ್ಲಂಘನೆ ಮಾಡಿತ್ತು.

WRC ಯು ಈ ತನಿಖಾವರದಿ ಹಾಗೂ ಶಿಫಾರಸುಗಳನ್ನು ಶಾಹಿ, ಕೊಲಂಬಿಯಾ ಸ್ಪೋಟ್ರ್ಸ್‍ವೇರ್ ಮತ್ತು ಇತರ ಬ್ರಾಂಡ್‍ಗಳೊಂದಿಗೆ ಹಂಚಿಕೊಂಡಿತು, ಅಷ್ಟೇ ಅಲ್ಲದೆ ಕೆಲಸದಿಂದ ತೆಗೆದುಹಾಕಿರುವ ಕಾರ್ಮಿಕರನ್ನು ಪುನ: ಕೆಲಸಕ್ಕೆ ತೆಗೆದುಕೊಳ್ಳಬೇಕು, ದೌರ್ಜನ್ಯದಲ್ಲಿ ನೇರವಾಗಿ ಭಾಗಿಯಾದ ಮ್ಯಾನೇಜರ್‍ಗಳನ್ನು ಕೆಲಸದಿಂದ ತೆಗೆದುಹಾಕಬೇಕು ಮತ್ತು ಯೂನಿಯನ್ ಅನ್ನು ತಕ್ಷಣವೇ ಮಾನ್ಯಮಾಡಬೇಕು ಎಂದು ಆಗ್ರಹಿಸಿತು. ಆರಂಭದಲ್ಲಿ ಶಾಹಿಯು ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಒಪ್ಪಿಕೊಂಡರೂ ಕಾರ್ಮಿಕರು ಸುರಕ್ಷಿತವಾಗಿ ಕಾರ್ಖಾನೆಗೆ ವಾಪಸ್ ಬರುವುದನ್ನು ಖಾತ್ರಿಪಡಿಸಲು ಮತ್ತು ಸಂಘಟನಾ ಸ್ವಾತಂತ್ರ್ಯವನ್ನು ಖಾತ್ರಿಪಡಿಸಲು ಒಪ್ಪಿಕೊಳ್ಳಲಿಲ್ಲ. ಶಾಹಿಯು ತನ್ನ ಅನ್ಯಾಯದ ನಡವಳಿಕೆಯನ್ನು ಅರ್ಥಪೂರ್ಣವಾಗಿ ಸರಿಪಡಿಸಿಕೊಳ್ಳಲು ವಿಫಲವಾಯಿತು. ಪರಿಣಾಮವಾಗಿ WRC ಯು ತನ್ನ ವರದಿಯನ್ನು ಸಾರ್ವಜನಿಕಗೊಳಿಸಿ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗುವಂತೆ ನೋಡಿಕೊಂಡಿತು. ಈ ಮೂಲಕ ಶಾಹಿ ಕಂಪನಿ ಮತ್ತು ಬ್ರಾಂಡ್‍ಗಳ ಮೇಲೆ ಒತ್ತಡ ತಂದಿತು. ಯೂನಿವರ್ಸಿಟಿಯೂ ತನಗಾಗಿ ಉತ್ಪಾದಿಸುವ ಕೊಲಂಬಿಯಾದ ಮೇಲೆ ಒತ್ತಡ ಹೇರುವಂತೆ ಮಾಡಿತು.

WRC ಯು ತನ್ನ ವರದಿಯನ್ನು ಬಿಡುಗಡೆ ಮಾಡಿ ಒತ್ತಡ ತಂದ ಪರಿಣಾಮವಾಗಿ, ಜೂನ್ 25 ರಂದು ಶಾಹಿ ಎಕ್ಸ್‍ಪೋಟ್ರ್ಸ್ ಮ್ಯಾನೇಜ್‍ಮೆಂಟ್ ಯೂನಿಯನ್ ಅನ್ನು ಸಂಪರ್ಕಿಸಿ, ಒಂದು ಮೆಮೊರಾಂಡಮ್ ಆಫ್ ಅಂಡರ್‍ಸ್ಟಾಂಡಿಗೆ (MOU)ಗೆ ಸಹಿ ಹಾಕಿತು. ಈ MOU ನ ಮುಖ್ಯ ಅಂಶಗಳನ್ನು ಜೂನ್ ಕೊನೆಯ ಹೊತ್ತಿಗೆ ಯಶಸ್ವಿಯಾಗಿ ಜಾರಿಗೊಳಿಸಲಾಯಿತು. ದೈಹಿಕವಾಗಿ ಹಲ್ಲೆಗೊಳಗಾಗಿದ್ದ, ಕೊಲೆ ಬೆದರಿಕೆ ಎದುರಿಸಿದ್ದ, ಕೆಲಸದಿಂದ ತೆಗೆದುಹಾಕಿದ್ದ 15 ಕಾರ್ಮಿಕರನ್ನು, ಅವರಿಗೆ ಯಾವುದೇ ಸಮಸ್ಯೆಯಾಗದಂತೆ, ವೇತನದ ಹಿಂಬಾಕಿಯನ್ನೂ ಕೊಟ್ಟು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಲಾಯಿತು. ಈ ಕಾರ್ಮಿಕರು ಕೆಲಸಕ್ಕೆ ವಾಪಸ್ ಬಂದದ್ದನ್ನು WRC ಮತ್ತು ಬೈಯರ್ಸ್ ಅವರು ಗಮನಿದ್ದರು. ಶಾಹಿಯು ಯೂನಿಯನ್ ಅನ್ನು ಮಾನ್ಯ ಮಾಡಿದುದಲ್ಲದೆ ಅದರೊಂದಿಗೆ ನಿರಂತರವಾಗಿ ಮಾತುಕತೆಯಾಡುವುದಾಗಿ ಒಪ್ಪಿಕೊಂಡಿತು. ಜೊತೆಗೆ ದೌರ್ಜನ್ಯಕ್ಕೆ ಕಾರಣರಾದ, ಜವಾಬ್ದಾರರಾದ ಮ್ಯಾನೇಜರ್ ಹಾಗೂ ಸೂಪರ್‍ವೈಸರ್‍ಗಳನ್ನು ಕೆಲಸದಿಂದ ತೆಗೆದುಹಾಕಲು ಕ್ರಮ ಕೈಗೊಂಡಿತು.

 

ಗೋಕಲ್‍ದಾಸ್ ಇಂಡಿಯಾ

ಗೋಕಲ್‍ದಾಸ್ ಇಂಡಿಯಾ ಕಾರ್ಖಾನೆಯ ಬಾಲವಾಡಿಯಲ್ಲಿ ಕಾರ್ಮಿಕರ ಮಗುವು ಮೃತಪಟ್ಟ  ದುರ್ಘಟನೆ ನಡೆದಿತ್ತು. WRC ಯ ತನಿಖೆಯಿಂದ ಕಂಡು ಬಂದದ್ದೇನೆಂದರೆ ಈ ದುರ್ಘಟನೆಯ ಸಮಯದಲ್ಲಿ ಕಾರ್ಖಾನೆಯು ಹಲವಾರು ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಿತ್ತು; ಬಾಲವಾಡಿಯ ಸಿಬ್ಬಂದಿಗೆ ಸೂಕ್ತ ತರಬೇತಿ ಇರಲಿಲ್ಲ, ತುರ್ತು ಸಂದರ್ಭದ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಇರಲಿಲ್ಲ. ಒಂದು ಕಾರ್ಖಾನೆಯು ಇವನ್ನೆಲ್ಲ ಪಾಲಿಸಿದ್ದಿದ್ದರೆ ಮಗುವು ಮೃತ ಪಡುವುದನ್ನು ತಡೆಯಬಹುದಾಗಿತ್ತು. ಮಗುವಿನ ತಾಯಿಗೆ ಆದ ಅಪಾರ ನಷ್ಟ ಹಾಗೂ ಕಂಪನಿಯ ಆರ್ಥಿಕ ಸಂಪನ್ಮೂಲ (ಮಲ್ಟಿ ಬಿಲಿಯನ್ ಡಾಲರ್ ಖಾಸಗೀ ಆಸ್ತಿ ಹೂಡಿಕೆಯ ಸಂಸ್ಥೆಯಾದ ಬ್ಲಾಕ್‍ಸ್ಟೋನ್ ಗ್ರೂಪ್, ಗೋಕಲ್‍ದಾಸ್‍ನ ಮಾಲೀಕನಾಗಿತ್ತು) ಗಳನ್ನು ಗಮನದಲ್ಲಿಟ್ಟುಕೊಂಡು WRC ಯು ಮಗುವಿನ ತಾಯಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿತ್ತು.

ಈ ಕಾರಣದಿಂದ 2015, ಸೆಪ್ಟೆಂಬರ್ 9 ರಂದು ಗೋಕಲ್‍ದಾಸ್ ಎಕ್ಸ್‍ಪೋಟ್ರ್ಸ್ ಮತ್ತು ಬೆಂಗಳೂರು ಮೂಲಕ ಕಾರ್ಮಿಕ ಸಂಘಟನೆ ಗಾರ್ಮೆಂಟ್ ಅಂಡ್ ಟೆಕ್ಸ್‍ಟೈಲ್ ವರ್ಕರ್ಸ್ ಯೂನಿಯನ್‍ಗಳ ನಡುವೆ ಮಾತುಕತೆ ನಡೆದು, ಕಂಪನಿಯು ಮಗುವಿನ ತಾಯಿಗೆ ಹೆಚ್ಚುವರಿ ಪರಿಹಾರವಾಗಿ $ 10,500 ಗಳನ್ನು (ಸುಮಾರು 9 ವರ್ಷದ ವೇತನ) ನೀಡಲು ಒಪ್ಪ್ಪಿಕೊಂಡಿತು ಎಂದು ನಿಮಗೆ ಹೇಳಲು ನಮಗೆ ಬಹಳ ಸಂತೋಷವಾಗುತ್ತದೆ. ಸೆಪ್ಟೆಂಬರ್ 14 ರಂದು ಕಾರ್ಮಿಕರು ಈ ಪರಿಹಾರದ ಹಣವನ್ನು ಪಡೆದುಕೊಂಡರು.

 

ಶಾಹಿ ಎಕ್ಸ್‍ಪೋಟ್ರ್ಸ್

2009ರ ಮಾರ್ಚ್ ನಲ್ಲಿ ಸರ್ಕಾರವು ಗಾರ್ಮೆಂಟ್ಸ್ ಉದ್ಯಮಕ್ಕೆ ಕನಿಷ್ಠವೇತನ ಹೆಚ್ಚಿಸಿ ಒಂದು ವರ್ಷ ಕಳೆದರೂ ಬೆಂಗಳೂರಿನ ಗಾರ್ಮೆಂಟ್ಸ್ ಉತ್ಪಾದಕರು ಕಾನೂನುಬದ್ಧ ಕನಿಷ್ಠವೇತನವನ್ನು ಕಾರ್ಮಿಕರಿಗೆ ಪಾವತಿಸಲು ವಿಫಲರಾಗಿದ್ದರು. ಸಾವಿರಾರು ಕಾರ್ಮಿಕರು ತಮ್ಮ ಕಾನೂನುಬದ್ಧ ಗಳಿಕೆಯಿಂದ ವಂಚಿತರಾಗಿದ್ದರು. ಸುಮಾರು 50,000 ಕಾರ್ಮಿಕರನ್ನು ಹೊಂದಿದ ಶಾಹಿ ಎಕ್ಸ್‍ಪೋಟ್ರ್ಸ್ ಬೆಂಗಳೂರಿನ ಪ್ರಮುಖ ಗಾರ್ಮೆಂಟ್ಸ್ ಕಂಪನಿಗಳಲ್ಲಿ ಒಂದಾಗಿದೆ. ಸರ್ಕಾರ ನಿಗದಿ ಪಡಿಸಿದ ಕನಿಷ್ಠವೇತನವನ್ನು ಪಾವತಿಸಿಸದೇ ಇರುವುದನ್ನು WRC ಯು ಸಾಕ್ಷಿ ಸಮೇತ ಶಾಹಿ ಎಕ್ಸ್‍ಪೋಟ್ರ್ಸ್ ಮುಂದೆ ಹಾಜರು ಪಡಿಸಿದಾಗ, ಶಾಹಿ ಆಡಳಿತವರ್ಗದವರು ತಾವು ಕನಿಷ್ಠವೇತನ ಕಾನೂನನ್ನು ಉಲ್ಲಂಘಿಸಿರುವುದನ್ನು ಮುಕ್ತವಾಗಿ ಒಪ್ಪಿಕೊಂಡರು, ಮತ್ತು ಬೆಂಗಳೂರಿನ ಗಾರ್ಮೆಂಟ್ಸ್ ಉದ್ಯಮದಲ್ಲಿ ಇದು ಸಾಮಾನ್ಯ ನಡವಳಿಕೆಯಾಗಿದೆ ಎಂದು ಹೇಳಿದ್ದರು. ಸರ್ಕಾರವು ಯಾರದ್ದೋ ಮಾತು ಕೇಳಿ ಕನಿಷ್ಠವೇತನವನ್ನು ಹೆಚ್ಚಿಸಿದೆ, ತಾವು ಅದನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಆಗ್ರಹಿಸಿದ್ದೇವೆಂದು ಕನಿಷ್ಠವೇತನ ಪಾವತಿಸದ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

ಗಾರ್ಮೆಂಟ್ಸ್ ಉತ್ಪಾದಕರು ಕನಿಷ್ಠವೇತನವನ್ನು ಪಾವತಿಸದೇ ಇರುವ ಈ ವಿಷಯವನ್ನು WRC ಯು ಅನಾವರಣಗೊಳಿಸಿದ ಫಲವಾಗಿ ಸುಮಾರು 110,000 ಕ್ಕೂ ಹೆಚ್ಚು ಕಾರ್ಮಿಕರು ಹಿಂಬಾಕಿಯೊಂದಿಗೆ ತಮ್ಮ ಹಕ್ಕುಬದ್ಧ ಕನಿಷ್ಠವೇತನವನ್ನು ಪಡೆದುಕೊಂಡರು ಎಂದು ಹೇಳಲು ನಮಗೆ ಸಂತೋಷವಾಗುತ್ತದೆ. ಈ ಕಾರ್ಮಿಕರಲ್ಲಿ ಯೂನಿವರ್ಸಿಟಿ ಬ್ರಾಂಡ್‍ಗಳಿಗೆ ಮತ್ತು ಅಮೆರಿಕಾದ ಪ್ರಮುಖ ಬ್ರಾಂಡ್‍ಗಳಿಗೆ ಉತ್ಪಾದಿಸುವವರೂ ಇದ್ದರು. ಈಗ ಇಡೀ ಬೆಂಗಳೂರಿನಾದ್ಯಂತ ಗಾರ್ಮೆಂಟ್ಸ್ ಕಂಪನಿಗಳು ಕಾರ್ಮಿಕರಿಗೆ ಕಾನೂನಬದ್ಧ ವೇತನವನ್ನು ಪಾವತಿಸುತ್ತಿವೆಯೇ ಎಂಬುದನ್ನು WRC ಯು ಖಾತ್ರಿಪಡಿಸಿಕೊಂಡಿದೆ.