ಲೆಸೊಥೊನಲ್ಲಿ ಲಿಂಗಾಧಾರಿತ ದೌರ್ಜನ್ಯ ನಿಷೇಧಕ್ಕಾಗಿ ಹೋರಾಟ

ಲೆಸೊಥೊನ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ನಡೆಯುತ್ತಿದ್ದ ಲಿಂಗಾಧಾರಿತ ದೌರ್ಜನ್ಯ ತಡೆಗಾಗಿ ರಚನೆಯಾದ ಮೈಲಿಗಲ್ಲಿನ  ಒಪ್ಪಂದಗಳು

ಲೆಸೊಥೊನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ನಡೆಯುತ್ತಿದ್ದ ಲಿಂಗಾಧಾರಿತ ದೌರ್ಜನ್ಯವನ್ನು ತಡೆಗಟ್ಟಲು ಪ್ರಮುಖ ಅಪಾರೆಲ್ ಬ್ರಾಂಡ್‍ಗಳು, ಕಾರ್ಮಿಕ ಸಂಘಟನೆಗಳು ಹಾಗೂ ಮಹಿಳಾ ಹಕ್ಕುಗಳ ವಕೀಲರ ಒಕ್ಕೂಟ ಮತ್ತು ಪ್ರಪಂಚದಾದ್ಯತ ಡೆನಿಮ್ ಜೀನ್ಸ್‍ಗಳ ಪ್ರಮುಖ ಉತ್ಪಾದಕರಾದ Nien Hsing ನಡುವೆ ಈ ನಿಟ್ಟಿನಲ್ಲಿ ಮೈಲಿಗಲ್ಲಾಗುವಂತಹ ಹಲವಾರು ಒಪ್ಪಂದಗಳಿಗೆ 2019 ರ ಆಗಸ್ಟ್ 15 ರಂದು ಸಹಿಹಾಕಲಾಯಿತು.

ಈ ಒಪ್ಪಂದವು ‘ವರ್ಕಸ್ ರೈಟ್ಸ್ ವಾಚ್’ ಎಂಬ ವ್ಯವಸ್ಥೆಯನ್ನು ರಚಿಸಲು ಅನುವು ಮಾಡಿಕೊಟ್ಟಿತ್ತು. ಇದೊಂದು ಸ್ವತಂತ್ರ ತನಿಖಾ ಸಂಸ್ಥೆಯಾಗಿದ್ದು ಲೆಸೆಥೊನಲ್ಲಿರುವ Nien Hsing ನ ಕಾರ್ಖಾನೆಗಳಲ್ಲಿ ನಡೆಯುವ ಲಿಂಗಾಧಾರಿತ ದೌರ್ಜನ್ಯಗಳ ದೂರುಗಳ ಕುರಿತು ತನಿಖೆ ನಡೆಸುವ ಜವಾಬ್ದಾರಿ ಹೊಂದಿದೆ ಮತ್ತು ಕೋಡ್ ಆಫ್ ಕಾಂಡಕ್ಟ್‍ಗಳ ಉಲ್ಲಂಘನೆಯದಾಗ ಕೆಲಸದಿಂದ ತೆಗೆದುಹಾಕುವಂತಹ ನಿರ್ದಿಷ್ಟ ಪರಿಹಾರಗಳನ್ನು ನಿರ್ದೇಶಿಸುವ ಜವಾಬ್ದಾರಿಯನ್ನೂ ಈ ಸಂಸ್ಥೆಯು ಹೊಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಯಾವುದೇ ಭೀತಿಯಿಲ್ಲದೆ ಲಿಂಗಾಧಾರಿತ ದೌರ್ಜನ್ಯ ಹಾಗೂ ಕಿರುಕುಳದ ಘಟನೆಗಳನ್ನು ದಾಖಲಿಸಲು ಕಾರ್ಮಿಕರಿಗೆ ಅನುಕೂಲವಾಗುವಂತೆ ಟೋಲ್ ಫ್ರೀ ಮಾಹಿತಿ ಟೆಲಿಫೋನ್ ಲೈನ್ ಅನ್ನು ರಚಿಸುವ ಅವಕಾಶವನ್ನೂ ಸಹ ಈ ಒಪ್ಪಂದವು ನೀಡಿದೆ.  ಮಹಿಳಾ ಹಕ್ಕುಗಳ ಸಂಸ್ಥೆಯೊಂದು ಇದನ್ನು ನಡೆಸುತ್ತದೆ. ಇದರೊಂದಿಗೆ ಲಿಂಗಾಧಾರಿತ ದೌರ್ಜನ್ಯ ಮತ್ತು ಕಿರುಕುಳಗಳ ಬಗ್ಗೆ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸುವುದೂ ಸೇರಿದಂತೆ ಕೋಡ್ ಆಫ್ ಕಾಂಡಕ್ಟ್ ವಿಚಾರಗಳು, Nien Hsing ನ ಕಾರ್ಖಾನೆಗಳಲ್ಲಿ ಲಿಂಗಾಧಾರಿತ ದೌರ್ಜನ್ಯ ನಡೆದರೆ ಅದನ್ನು ದಾಖಲಿಸುವ ಕ್ರಮಗಳು, ಹೀಗೆ ಈ ಎಲ್ಲದರ ಬಗ್ಗೆಯೂ ವಿಶೇಷ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಲಿಂಗಾಧಾರಿತವಾದ ಅಧಿಕಾರದ ಅಸಮಾನತೆಯನ್ನು ಬದಲಿಸುವ ಸಲುವಾಗಿ ಕಾರ್ಮಿಕರು ಒಗ್ಗಟ್ಟಾಗಿ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಲು ಅನುಕೂಲವಾಗುವಂತೆ ಕಾರ್ಮಿಕರ ಸಂಘಟನಾ ಸ್ವಾತಂತ್ರ್ಯವನ್ನೂ ಈ ಒಪ್ಪಂದವು ರಕ್ಷಿಸುತ್ತದೆ. ಅದಕ್ಕಾಗಿ ಕಾರ್ಮಿಕರ ಯಾವುದೇ ಸಂಘಟನಾ ಪ್ರಯತ್ನಗಳನ್ನು ದಮನಿಸುವುದಾಗಲೀ, ಕಾರ್ಮಿಕ ವಿರೋಧೀ ಕ್ರಮಗಳನ್ನಾಗಲೀ ಆಡಳಿತವರ್ಗವು ತೆಗೆದುಕೊಳ್ಳುವುದನ್ನಾಗಲೀ ಈ ಒಪ್ಪಂದವು ನಿಷೇಧಿಸುತ್ತದೆ.

ಈ ಒಪ್ಪಂದಗಳು ಲೆಸೊಥೋಗಷ್ಟೇ ಸೀಮಿತವಾಗದೆ, ಕೆಲಸದ ಸ್ಥಳದಲ್ಲಿ ಲಿಂಗಾಧಾರಿತ ದೌರ್ಜನ್ಯ ಮತ್ತು ಕಿರುಕುಳಗಳ ವಿರುದ್ಧ ಹೋರಾಡಲು ಒಂದು ಸ್ಫೂರ್ತಿದಾಯಕ ಮಾದರಿಯಾಗಿವೆ.