ನಮ್ಮ ಬಗ್ಗೆ

ವರ್ಕರ್ಸ್ ರೈಟ್ಸ್ ಕನ್ಸಾರ್ಶಿಯಂ (WRC), ಕಾರ್ಮಿಕ ಹಕ್ಕುಗಳ ಮೇಲ್ವಿಚಾರಣೆ ಮಾಡುವ ಸ್ವತಂತ್ರ ಸಂಸ್ಥೆಯಾಗಿದೆ. ಪ್ರಪಂಚದಾದ್ಯಂತದ ಕಾರ್ಖಾನೆಗಳಲ್ಲಿರುವ ಕೆಲಸದ ಪರಿಸ್ಥಿತಿಯನ್ನು ಕುರಿತು ನಾವು ತನಿಖೆ ನಡೆಸುತ್ತೇವೆ. ಬೆವರಿನಂಗಡಿಗಳಾಗಿರುವ ಕಾರ್ಖಾನೆಗಳ ಕೆಟ್ಟ ಕೆಲಸದ ಪರಿಸ್ಥಿತಿಯನ್ನು ದಾಖಲಿಸುವುದು ಮತ್ತು ತಡೆಗಟ್ಟುವುದು; ಗ್ಲೋಬಲ್ ಬ್ರಾಂಡ್ ಹಾಗೂ ರೀಟೈಲರ್‍ಗಳ ಕಾರ್ಮಿಕ ಕಾನೂನು ಉಲ್ಲಂಘನೆಯ ನಡವಳಿಕೆಗಳನ್ನು ಬಯಲಿಗೆಳೆಯುವುದು ಮತ್ತು ಉಡುಪು ಮತ್ತು ಇತರ ವಸ್ತುಗಳನ್ನು ಉತ್ಪಾದಿಸುವ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಿದೆ.

WRC ಯು ಕಾರ್ಮಿಕ ಕೇಂದ್ರಿತವಾದ ಸ್ವತಂತ್ರ ತನಿಖೆಗಳನ್ನು ಕೈಗೊಳ್ಳುತ್ತದೆ; ಪ್ರಮುಖ ಬ್ರಾಂಡ್‍ಗಳಿಗೆ ಉತ್ಪಾದಿಸುವ ಕಾರ್ಖಾನೆಗಳ ಕುರಿತು ಸಾರ್ವಜನಿಕ ವರದಿಗಳನ್ನು ಬಿಡುಗಡೆ ಮಾಡುತ್ತದೆ; ತಮ್ಮ ಮೇಲಾಗುವ ಅನ್ಯಾಯಗಳನ್ನು ಪ್ರತಿಭಟಿಸುವ ಕಾರ್ಮಿಕರ ಪ್ರಯತ್ನಗಳಿಗೆ ಬೆಂಬಲ ನೀಡುತ್ತದೆ ಮತ್ತು ಅವರ ಕೆಲಸದ ಸ್ಥಳದ ಹಕ್ಕುಗಳನ್ನು ಸಮರ್ಥಿಸುತ್ತದೆ. WRC ಯು ಹಲವಾರು ದೇಶಗಳಲ್ಲಿ ತನಿಖಾದಾರರನ್ನು ಹೊಂದಿದ್ದು, ಆಗ್ನೇಯ ಏಷ್ಯಾ, ಪೂರ್ವ ಏಷ್ಯಾ, ದಕ್ಷಿಣ ಏಷ್ಯಾ, ಅಮೆರಿಕಾ ಹಾಗೂ ಆಫ್ರಿಕಾಗಳಾದ್ಯಂತ ನೂರಾರು ಜನಸಮುದಾಯ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದೆ.

ಪ್ರಪಂಚದಾದ್ಯಂತ ವಸ್ತುಗಳನ್ನು ಉತ್ಪಾದಿಸುವ ಕಾರ್ಮಿಕರಿಗೆ ಉತ್ತಮ ಕೆಲಸದ ವಾತಾವರಣ ಮತ್ತು ವೇತನ ದೊರಕಬೇಕಾದರೆ ಪ್ರಮುಖ ಬ್ರಾಂಡ್‍ಗಳ ಗ್ಲೋಬಲ್ ಸಪ್ಲೈಚೈನ್‍ನಲ್ಲಿ ವ್ಯವಸ್ಥಿತ ಬದಲಾವಣೆಯಾಗಬೇಕಿದೆ; ಆದರೆ ಬ್ರಾಂಡ್ ಹಾಗೂ ರೀಟೈಲರ್‍ಗಳಲ್ಲಿ ಈ ಬದಲಾವಣೆಯು ತಂತಾನೇ ಸಂಭವಿಸುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ನಿರ್ದಿಷ್ಟ ಕಾರ್ಖಾನೆಯಾಧಾರಿತ ಕೆಲಸದೊಂದಿಗೆ, ಕಾರ್ಮಿಕ ಪ್ರತಿನಿಧಿಗಳು ಹಾಗೂ ಜಾಗತಿಕ ಕಾರ್ಪೊರೇಶನ್‍ಗಳು ಪರಸ್ಪರ ಒಪ್ಪಂದಕ್ಕೆ ಒಳಪಡುವುದನ್ನು WRC ಯು ನಿರೀಕ್ಷಿಸುತ್ತದೆ. ಪ್ರಸ್ತುತ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಕಾರ್ಮಿಕರ ಸ್ಥಿತಿಗತಿಗಳನ್ನು ಕಾಪಾಡುವ ಸಾರ್ವಜನಿಕ ಪ್ರಯತ್ನಗಳು ಮಿತಿಗೊಳಪಟ್ಟಿವೆ ಮತ್ತು ಕಾರ್ಪೊರೇಟ್‍ಗಳ ಸ್ವಯಂಪ್ರೇರಿತ “ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ’ಯ ಕಾರ್ಯಕ್ರಮಗಳು ಕಾರ್ಮಿಕರ ರಕ್ಷಣೆ ಮಾಡಲು ಸೋತಿವೆ. ಇಂತಹ ಸಂದರ್ಭದಲ್ಲಿ WRC ಯ ಬೆಂಬಲದೊಂದಿಗೆ ಬಾಂಗ್ಲಾದೇಶದಲ್ಲಿ ಬೆಂಕಿ ಮತ್ತು ಕಟ್ಟಡ ಸುರಕ್ಷೆಗಾಗಿ ರಚನೆಯಾದ ಅಕಾರ್ಡ್ (Accord) ನಂತಹ ಖಾಸಗೀ ಒಪ್ಪಂದಗಳು ಕಾರ್ಮಿಕರಿಗೆ ನಿಜವಾದ ಲಾಭವನ್ನು ಒದಗಿಸುವ ವ್ಯವಸ್ಥೆಯಾಗುತ್ತದೆ.

ಅಂತಾರಾಷ್ಟ್ರೀಯ ಕಾರ್ಮಿಕ ಹಕ್ಕುಗಳ ತಜ್ಞರು, ವಿದ್ಯಾರ್ಥಿಗಳು ಮತ್ತು ಪ್ರಮುಖ ವಿಶ್ವವಿದ್ಯಾನಿಲಯಗಳಿಂದ 2000 ರಲ್ಲಿ WRC ಯು ಸ್ಥಾಪನೆಯಾಯಿತು. ವಿಶ್ವವಿದ್ಯಾಲಯಗಳ ಲೋಗೋಗಳನ್ನು ಹೊಂದಿರುವ ಉಡುಪುಗಳನ್ನು ತಯಾರಿಸುವ ಕಾರ್ಮಿಕರ ಉತ್ತಮ ಕೆಲಸದ ಪರಿಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು WRC ಯು ಕೆಲಸ ಮಾಡುತ್ತಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾಗಳ ಬಹಳಷ್ಟು ಕಾಲೇಜ್‍ಗಳು ಹಾಗೂ ಯೂನಿವರ್ಸಿಟಿಗಳು    WRC ಗೆ ಅಫಿಲಿಯೇಟ್ ಆಗಿವೆ. ಜೊತೆಗೆ ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಮುನಿಸಿಪಲ್ ಸರ್ಕಾರ ಮತ್ತು ಪೆನ್ಷನ್ ಫಂಡ್‍ಗಳನ್ನೂ ಒಳಗೊಂಡಂತೆ ಹಲವಾರು ಸರ್ಕಾರೀ ಸಂಸ್ಥೆಗಳೊಂದಿಗೆ WRC ಯು ಕೆಲಸ ಮಾಡುತ್ತದೆ.