ಪದೇಪದೇ ಕೇಳಲಾದ ಪ್ರಶ್ನೆಗಳು

ವರ್ಕರ್ಸ್ ರೈಟ್ಸ್ ಕನ್ಸಾರ್ಶಿಯಂ (WRC) ಶುರುವಾದದ್ದು ಹೇಗೆ?

ಶೈಕ್ಷಣಿಕ ಉಡುಪುಗಳ ಮಾರಾಟವು ಅಮೆರಿಕಾದಲ್ಲಿ ದೊಡ್ಡಮಟ್ಟದ ವ್ಯವಹಾರವಾಗಿದೆ. ಯೂನಿವರ್ಸಿಟಿಗಳ ಲೋಗೋಗಳನ್ನು ಹೊಂದಿರುವ ಬಟ್ಟೆಗಳನ್ನು ತಯಾರಿಸುತ್ತಿರುವ ಕಾರ್ಮಿಕರ ಹಕ್ಕುಗಳನ್ನು ಗೌರವಿಸಲಾಗುತ್ತಿಲ್ಲ ಎಂದು 1998 ರಲ್ಲಿ ಯೂನಿವರ್ಸಿಟಿಗಳ ವಿದ್ಯಾರ್ಥಿಗಳು, ಪ್ರೊಫೆಸರ್‍ಗಳು ಹಾಗೂ ಇತರ ಸದಸ್ಯರ ಅರಿವಿಗೆ ಬಂದಿತು. ಕಾರ್ಖಾನೆಗಳಲ್ಲಿ ಕಾರ್ಮಿಕರ ಕಾನೂನುಗಳ ಉಲ್ಲಂಘನೆಯಾಗುತ್ತಿದೆ ಎಂದು ಅರಿವಿಗೆ ಬಂದೊಡನೆ ಶೈಕ್ಷಣಿಕ ವಲಯದ ಒಳಗಿನ ಹಾಗೂ ಹೊರಗಿನ ಅನೇಕ ವ್ಯಕ್ತಿಗಳು ಇದರ ಬಗ್ಗೆ ಕಾಳಜಿ ವಹಿಸಿದರು. ಈ ಸಮಸ್ಯೆಯನ್ನು ತಡೆಗಟ್ಟಲು ಯೂನಿವರ್ಸಿಟಿಗಳು, ಕಾರ್ಮಿಕರ ನಿರ್ದಿಷ್ಟ ಮೂಲಭೂತ ಹಕ್ಕುಗಳ ಕುರಿತಂತೆ ತಮ್ಮದೇ ಆದ ಕೋಡ್ ಆಫ್ ಕಾಂಡಕ್ಟ್ ಅನ್ನು ಜಾರಿಗೊಳಿಸಿದವು. ಈ ಕೋಡ್ ಆಫ್ ಕಾಂಡಕ್ಟ್‍ಗಳು ಸಮರ್ಥವಾಗಿ ಪಾಲನೆಯಾಗುತ್ತದೆಯೋ ಇಲ್ಲವೋ ಎಂದು ಖಾತ್ರಿಪಡಿಸಲು WRC ಯ ರಚನೆಯಾಯಿತು. ಕಾರ್ಖಾನೆಗಳಲ್ಲಿ ಕಾರ್ಮಿಕರ ಪರಿಸ್ಥಿತಿಯನ್ನು ಸುಧಾರಿಸುವುದು ಇದರ ಉದ್ದೇಶವಾಗಿತ್ತು. ಈ ಕೋಡ್‍ಗಳ ಅನುಸರಣೆಯಾಗುತ್ತಿದೆಯೋ ಇಲ್ಲವೋ ಎಂದು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ WRC ಯು ಕಾರ್ಮಿಕರ ಪರಿಸ್ಥಿತಿಯ ಬಗ್ಗೆ ಕಾರ್ಖಾನೆಗಳಲ್ಲಿ ತನಿಖೆ ನಡೆಸುತ್ತದೆ, ತನಿಖಾ ವರದಿಗಳನ್ನು ಪ್ರಕಟಿಸುತ್ತದೆ ಮತ್ತು ಕೋಡ್‍ಗಳ ಉಲ್ಲಂಘನೆಯಾದಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಕ್ರಮಗಳನ್ನು ಕೈಗೊಳ್ಳುತ್ತದೆ.

ಅಮೆರಿಕಾದ ಮಾನವ ಹಕ್ಕು, ಕಾರ್ಮಿಕ ಹಕ್ಕುಗಳ ತಜ್ಞರ ಒಕ್ಕೂಟ, ಯೂನಿವರ್ಸಿಟಿಗಳ ಪ್ರೊಫೆಸರ್ ಹಾಗೂ ವಿದ್ಯಾರ್ಥಿಗಳಿಂದ WRC ಯ ರಚನೆಯಾಯಿತು. ಅದಕ್ಕೂ ಮುನ್ನ ಈ ನಿಟ್ಟಿನಲ್ಲಿ ಮಧ್ಯ ಅಮೆರಿಕಾ ಹಾಗೂ ಏಷ್ಯಾದ ಕಾರ್ಮಿಕ ಮತ್ತು ಮಾನವ ಹಕ್ಕುಗಳ ಚಳುವಳಿಗಾರರೊಂದಿಗೆ ಚರ್ಚಿಸಲಾಗಿತ್ತು. WRC ಗೆ ಮಾರ್ಗದರ್ಶನ ಮಾಡಲು ಮಾನವಹಕ್ಕು ಮತ್ತು ಕಾರ್ಮಿಕ ಹಕ್ಕುಗಳ ತಜ್ಞರ ಸಲಹಾ ಕೌನ್ಸಿಲ್ ಒಂದನ್ನು ರಚಿಸಲಾಗಿದೆ.

 

WRC ಯು ತನಿಖೆಯನ್ನು ಹೇಗೆ ಕೈಗೊಳ್ಳುತ್ತದೆ?

WRC ಯ ತನಿಖೆಯು ಕಾರ್ಮಿಕರ ಸಮಗ್ರ ಸಂದರ್ಶನವನ್ನು ಒಳಗೊಳ್ಳುತ್ತದೆ. ಈ ಸಂದರ್ಶನವನ್ನು ಕಾರ್ಖಾನೆಯಿಂದ ಹೊರಗೆ, ಕಾರ್ಮಿಕರ ಮನೆಯಲ್ಲಿ ಅಥವಾ ಅವರ ಸಮುದಾಯದ ಯಾವುದೇ ಜಾಗದಲ್ಲಿ ನೆರವೇರಿಸಲಾಗುತ್ತದೆ. ಜೊತೆಗೆ WRCಯು ಕಾರ್ಖಾನೆಯ ಮ್ಯಾನೇಜರ್‍ಗಳು, ಸರ್ಕಾರಗಳು  ಪ್ರೊವಿನ್ಸ್‍ಗಳು ಅಥವಾ ದೇಶದ ಕಾರ್ಮಿಕ ಇನ್ಸ್‍ಪೆಕ್ಟರ್‍ಗಳು, ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು, ಶೈಕ್ಷಣಿಕ ವ್ಯಕ್ತಿಗಳು, ಕಾರ್ಮಿಕ ವಕೀಲರು, ಮತ್ತು ಈ ಪ್ರಕ್ರಿಯೆಗೆ ಸಹಕರಿಸಬಹುದಾದ ಇನ್ನಿತರ ವ್ಯಕ್ತಿಗಳೊಂದಿಗೆ ವ್ಯವಹರಿಸುತ್ತದೆ. ಮ್ಯಾನೇಜರ್‍ಗಳು ಒಪ್ಪಿಗೆ ನೀಡಿದಲ್ಲಿ WRC ಯು ಕಾರ್ಖಾನೆಯ ತನಿಖೆಯನ್ನೂ ಕೈಗೊಳ್ಳುತ್ತದೆ. ನಂತರ ತನಗೆ ಸಿಕ್ಕಿದ ಮಾಹಿತಿಗಳು ಮತ್ತು ಸಂದರ್ಶನಗಳ ವಿಶ್ಲೇಷಣೆ ಮಾಡಿ, ಯೂನಿವರ್ಸಿಟಿ ಕೋಡ್ ಅನುಸರಣೆಯಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ನಿರ್ಧಾರಕ್ಕೆ ಬರುತ್ತದೆ. ಕೋಡ್‍ಗಳು ಉಲ್ಲಂಘನೆಯಾದ ಸಂದರ್ಭದಲ್ಲಿ ಅದನ್ನು ಸರಿಪಡಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು WRC ಯು ಶಿಫಾರಸು ಮಾಡುತ್ತದೆ. ತನಿಖೆಯ ಅಧಿಕೃತ ವರದಿಯನ್ನು ಯುನೈಟೆಡ್ ಸ್ಟೇಟ್ಸ್‍ನಲ್ಲಿ ಪ್ರಕಟಿಸುತ್ತದೆ ಮತ್ತು ಕೆಲವು ಪ್ರಕರಣಗಳಲ್ಲಿ ಉಲ್ಲಂಘನೆಯಾದ ಸ್ಥಳದಲ್ಲಿ ಅನುವಾದಿತ ವರದಿಯನ್ನು ಸಮುದಾಯದ ಮೂಲಕ ಬಿಡುಗಡೆ ಮಾಡಲಾಗುತ್ತದೆ.

ಕೋಡ್ ಆಫ್ ಕಾಂಡಕ್ಟ್‍ನಲ್ಲಿರುವ ಪ್ರತಿಯೊಂದು ವಿಷಯದ ಬಗ್ಗೆಯೂ ಖಚಿತ ನಿರ್ಧಾರಕ್ಕೆ ಬರಲು ಕೆಲವೇ ದಿನಗಳ ತನಿಖೆಯು ಸಾಕು ಎಂಬುವುದನ್ನು WRC ಯು ನಂಬುವುದಿಲ್ಲ. ವಾಸ್ತವಿಕ ಕಾರಣಕ್ಕಾಗಿ, ಸ್ವತ: ಕಾರ್ಮಿಕರಿಂದ ಅಥವಾ ಇತರೇ ವ್ಯಕ್ತಿಗಳು ಎತ್ತುವ ಸಮಸ್ಯೆಗಳ ಬಗ್ಗೆ ಕಾರ್ಖಾನೆ ಮತ್ತು ಉದ್ಯಮದ ಗಮನಕ್ಕೆ ತಂದು ಆದ್ಯತೆಯ ಮೇರೆಗೆ ತನಿಖೆ ನಡೆಸುತ್ತದೆ.

ಉತ್ತರ ಅಮೆರಿಕಾ ಯೂನಿವರ್ಸಿಟಿಗಳ ಕೋಡ್ ಆಫ್ ಕಾಂಡಕ್ಟ್‍ಗಳು ಒಳಗೊಂಡಿರುವ ಕಾರ್ಮಿಕ ಹಕ್ಕುಗಳ ಬಗ್ಗೆ WRC ಯು ಕಾರ್ಮಿಕರಿಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತದೆ. ಕೋಡ್‍ಗಳು ಉಲ್ಲಂಘನೆಯಾದಾಗ ಕಾರ್ಮಿಕರು ಸ್ಥಳೀಯ ಸಂಸ್ಥೆಯ ಮೂಲಕ ಮತ್ತು ನೇರವಾಗಿ WRC ಯೊಂದಿಗೆ ದೂರನ್ನು ದಾಖಲಿಸಲು ಬೇಕಾದ ವ್ಯವಸ್ಥೆಯನ್ನು ಹುಟ್ಟುಹಾಕುವುದು ನಮ್ಮ ಉದ್ದೇಶವಾಗಿದೆ. ಯಾವುದೇ ಮೇಲ್ವಿಚಾರಣಾ ಸಂಸ್ಥೆಯು (monitoring organizationa) ವರ್ಷಪೂರ್ತಿ ಪ್ರತಿದಿನ ಕಾರ್ಮಿಕರೊಂದಿಗೆ ಇರಲು ಆಗುವುದಿಲ್ಲ. ಆದ್ದರಿಂದ ಕೋಡ್ ಆಫ್ ಕಾಂಡಕ್ಟ್ ಅನುಸರಣೆಯಾಗುತ್ತಿವೆಯೇ ಎಂದು ಖಾತ್ರಿಪಡಿಸಿಕೊಳ್ಳುವ ಉತ್ತಮ ವಿಧಾನವೆಂದರೆ ಪ್ರತಿಯೊಂದು ಕಾರ್ಖಾನೆಯಲ್ಲಿಯೂ ಕಾರ್ಮಿಕರೇ ಮೇಲ್ವಿಚಾರಕರಾಗಬೇಕೆಂದು WRC ಯು ನಂಬುತ್ತದೆ.

ತನ್ನ ಉದ್ದೇಶವನ್ನು ಪೂರ್ತಿಗೊಳಿಸುವುದಕ್ಕೆ WRC ಯು ಬದ್ಧವಾಗಿದೆ. ಜೊತೆಗೆ ಅದು ಒಂದು ಮಾಹಿತಿ ಸಂಪನ್ಮೂಲವಾಗಿ ಸೇವೆಯನ್ನೂ ಒದಗಿಸುತ್ತದೆ. ಉತ್ತರ ಅಮೆರಿಕಾದ ಯೂನಿವರ್ಸಿಟಿಗಳಿಗೆ ಉಡುಪು ತಯಾರಿಸುವ ಕಾರ್ಖಾನೆಗಳ ಪ್ರಸ್ತುತ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಯಾವುದೇ ಆಸಕ್ತ ವ್ಯಕ್ತಿಗಳು ಈ ಮಾಹಿತಿಯನ್ನು ಉಪಯೋಗಿಸಿಕೊಂಡು ತಿಳಿದುಕೊಳ್ಳಬಹುದು.

 

WRC ಯು ತನಿಖೆ ಮಾಡಲು ಕಾರ್ಖಾನೆಗಳನ್ನು ಹೇಗೆ ಆರಿಸಿಕೊಳ್ಳುತ್ತದೆ?

ಕಾರ್ಮಿಕರಿಂದ ಸ್ವೀಕರಿಸಿದ ನೇರ ದೂರುಗಳ ಆಧಾರದ ಮೇಲೆ ಅಥವಾ ಯಾವುದೇ ಸಂಸ್ಥೆಯು ನೀಡಿದ ಮಾಹಿತಿಯ ಮೇರೆಗೆ WRC ಯು ಆ ಕಾರ್ಖಾನೆಯನ್ನು ತನಿಖೆಗೆ ಕೈಗೆತ್ತಿಕೊಳ್ಳುತ್ತದೆ.

ಉತ್ತರ ಅಮೆರಿಕಾದ ಯೂನಿವರ್ಸಿಟಿಗಳಿಗೆ ಉತ್ಪಾದಿಸುವ ಕಾರ್ಖಾನೆಯ ಕಾರ್ಮಿಕರೊಬ್ಬರಿಂದ WRC ಗೆ ನೇರ ದೂರು ಬಂದ ಸಂದರ್ಭದಲ್ಲಿ ಆ ಕಾರ್ಖಾನೆಯನ್ನು ಅಧಿಕೃತವಾಗಿ ತನಿಖೆಗೆ ಒಳಪಡಿಸಲು WRC ಯು ಈ ಕೆಳಗಿನ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಉಲ್ಲಂಘನೆಯಾದ ಕಾರ್ಮಿಕ ಹಕ್ಕಿನ ಗಂಭೀರತೆ, ಸ್ಥಳೀಯ ಸಂಘಟನೆಗಳ ಅಭಿಪ್ರಾಯಗಳು, ದೂರಿನ ವಿಶ್ವಾಸಾರ್ಹತೆ ಮತ್ತು WRC ಸಂಯೋಜಿತ ಎಷ್ಟು ಯೂನಿವರ್ಸಿಟಿಗಳಿಗೆ ಈ ಕಾರ್ಖಾನೆ ಉತ್ಪಾದಿಸುತ್ತಿವೆ ಎಂಬೆಲ್ಲ ಅಂಶವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಕೆಲವೊಂದು ನಿರ್ದಿಷ್ಟ ಸಂದರ್ಭದಲ್ಲಿ ಮೂರನೆಯವರಿಂದ ಹೇಳಿಸಿಕೊಳ್ಳದೆ WRC ಯು ತನಿಖೆಯನ್ನು ಕೈಗೆತ್ತಿಕೊಳ್ಳುತ್ತದೆ. ಯೂನಿವರ್ಸಿಟಿಗೆ ಉತ್ಪಾದಿಸುವ ಕಾರ್ಖಾನೆಯಲ್ಲಿ ಗಂಭೀರ ಸಮಸ್ಯೆಯಿದೆ ಎಂದು ಸ್ಥಳೀಯ ಸಂಘಟನೆಯು ಮಾಹಿತಿ ನೀಡಿದಾಗ, ಆ ಕಾರ್ಖಾನೆಯ ಪರಿಸ್ಥಿತಿ ತಿಳಿದಿರದಿದ್ದರೂ ತನಿಖೆಯನ್ನು ಕೈಗೆತ್ತಿಕೊಳ್ಳುತ್ತದೆ.

 

WRC ಯು ಏಕೆ ಕೆಲವೇ ಕಾರ್ಖಾನೆಗಳ ತನಿಖೆಗೆ ಆಸಕ್ತವಾಗಿದೆ? ಇತರ ಕಾರ್ಖಾನೆಗಳ ಮೇಲೆ ಏಕಿಲ್ಲ?

ಎಲ್ಲ ಕಾರ್ಖಾನೆಗಳಲ್ಲಿಯೂ ಕಾರ್ಮಿಕರ ಹಕ್ಕುಗಳು ಗೌರವಿಸಲ್ಪಡಬೇಕೆಂದು WRC ಯು ಬಯಸುತ್ತದೆ. ಆದರೆ ಯೂನಿವರ್ಸಿಟಿ ಉಡುಪುಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಮಾತ್ರ ನಾವು ತನಿಖೆಯನ್ನು ನಡೆಸುತ್ತೇವೆ. ಏಕೆಂದರೆ ಈ ಕಾರ್ಖಾನೆಗಳಲ್ಲಿ ಕಾರ್ಮಿಕ ಹಕ್ಕುಗಳ ಉಲ್ಲಂಘನೆ ಕಂಡುಬಂದರೆ ಅದನ್ನು ಸರಿಪಡಿಸಿಕೊಳ್ಳುವ ಕ್ರಮವನ್ನು ಆಗ್ರಹಿಸುವ ಅಧಿಕಾರ WRC ಗೆ ಇರುತ್ತದೆ.

 

ಯೂನಿವರ್ಸಿಟಿಗೆ ಉತ್ಪಾದಿಸುವ ಕಾರ್ಖಾನೆಗಳ ಪಟ್ಟಿ ಎಲ್ಲಿಂದ ಬಂತು?

WRC ಗೆ ಸಂಯೋಜಿತವಾದ ಯೂನಿವರ್ಸಿಟಿಯ ಲೋಗೊ ಅಥವಾ ಹೆಸರನ್ನು ಬಳಸಿ ಉಡುಪನ್ನು ಉತ್ಪಾದಿಸುವ ಕಂಪನಿಗಳು ತಾವು ಯಾವ ಯಾವ ಕಾರ್ಖಾನೆಯಲ್ಲಿ ಉತ್ಪಾದಿಸುತ್ತೇವೆ ಎಂದು ಯೂನಿವರ್ಸಿಟಿಗಳಿಗೆ ತಿಳಿಸುವುದು ಕಡ್ಡಾಯವಾಗಿದೆ. ಈ ಮಾಹಿತಿಯ ಆಧಾರದಲ್ಲಿ WRC ಯು ಯೂನಿವರ್ಸಿಟಿಗಳಿಗೆ ಉತ್ಪಾದಿಸುವ ಪ್ರತಿಯೊಂದು ಕಾರ್ಖಾನೆಯ ಹೆಸರು, ವಿಳಾಸದೊಂದಿಗೆ ಸಮಗ್ರವಾಗಿ ಪಟ್ಟಿ ಮಾಡುತ್ತದೆ.

 

WRC ಯು ಸಮಸ್ಯೆಯನ್ನು ಗುರುತಿಸಿದಾಗ ಬ್ರಾಂಡ್‍ಗಳು ಅವರ ಕಾಂಟ್ರಾಕ್ಟ್ ರದ್ದುಗೊಳಿಸುತ್ತಾರೆಯೇ?

ಸಪ್ಲೈಯರ್ ಕಾರ್ಖಾನೆಯಲ್ಲಿ ಸಮಸ್ಯೆ ಕಂಡುಬಂದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಬ್ರಾಂಡ್ ಕಂಪನಿಗಳು ತಮ್ಮ ಉತ್ಪಾದನೆಯನ್ನು ಅದೇ ಕಾರ್ಖಾನೆಯಲ್ಲಿ ಮುಂದುವರೆಸಬೇಕು ಮತ್ತು ಕಾರ್ಖಾನೆಯ ಸ್ಥಿತಿಗತಿಗಳನ್ನು ಉತ್ತಮಪಡಿಸಲು ಕ್ರಮ ಕೈಗೊಳ್ಳಬೇಕೆಂದೇ WRC ಯು ಯಾವಾಗಲೂ ಸಲಹೆ ನೀಡುತ್ತದೆ. ಸಮಸ್ಯೆ ಕಂಡುಬಂದ ತಕ್ಷಣ ಕಾಂಟ್ರಾಕ್ಟ್ ರದ್ದುಪಡಿಸಿ ಕಾರ್ಖಾನೆಯಿಂದ ಕಾಲ್ತೆಗೆಯುವ ಬ್ರಾಂಡ್‍ಗಳು ತಮ್ಮ ಜವಾಬ್ದಾರಿಯನ್ನು ಹೊರಲು ಸಿದ್ಧವಾಗಿರುವುದಿಲ್ಲ ಎಂದು WRC ಯು ನಂಬುತ್ತದೆ. ಮೆಕ್ಸಿಕೋದ ಕುಕ್‍ಡಂಗ್ ಕಾರ್ಖಾನೆಯಲ್ಲಿ ಸಮಸ್ಯೆಯಾದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಬ್ರಾಂಡ್ ನೈಕಿಗೆ ಅಲ್ಲೇ ಉಳಿಯಬೇಕು ಮತ್ತು ಪರಿಸ್ಥಿತಿಯನ್ನು ಉತ್ತಮಪಡಿಸಲು ಪ್ರಯತ್ನಿಸಬೇಕೆಂದು WRC ಯು ಒತ್ತಾಯಿಸಿತ್ತು. ಈ ಸಲಹೆಯನ್ನು ನೈಕಿ ಒಪ್ಪಿ ಸ್ವೀಕರಿಸಿತ್ತು.

 

ತನಿಖೆಯಿಂದ ಹೊರಬಂದ ಫಲಿತಾಂಶವನ್ನು WRC ಯು ಸಾರ್ವಜನಿಕವಾಗಿ ಪ್ರದರ್ಶಿಸುವುದೇ?

ಹೌದು, ಎಲ್ಲ ತನಿಖಾ ವರದಿಗಳನ್ನೂ ಪ್ರಕಟಿಸಲಾಗುತ್ತದೆ, ಮತ್ತು ಕೆಲವನ್ನು ಸ್ಥಳೀಯ ಭಾಷೆಗಳಲ್ಲಿ ಅನುವಾದಿಸಲಾಗುತ್ತದೆ. ಆದರೆ ದೂರು ಕೊಟ್ಟ ಕಾರ್ಮಿಕರ ಅಥವಾ ಸಂದರ್ಶನದಲ್ಲಿ ಪಾಲ್ಗೊಂಡ ಕಾರ್ಮಿಕರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಲಾಗುತ್ತದೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು.

 

ಕೋಡ್ ಆಫ್ ಕಾಂಡಕ್ಟ್‍ಗಳು ತುಂಬಾ ಇವೆಯೇ? ಪ್ರಸ್ತುತ ಜಾರಿಯಲ್ಲಿರುವ ಕಾರ್ಮಿಕ ಹಕ್ಕುಗಳನ್ನು ಕಾರ್ಮಿಕರು ಹಲವಾರು ಕೋಡ್ ಆಫ್ ಕಾಂಡಕ್ಟ್ ಅಡಿಯಲ್ಲಿ ಹೇಗೆ ಗುರುತಿಸುತ್ತಾರೆ.? 

ಕೋಡ್ ಆಫ್ ಕಾಂಡಕ್ಟ್‍ಗಳು ಬಹಳ ಇವೆ ಮತ್ತು ಇವು ಗೊಂದಲವನ್ನು ಉಂಟುಮಾಡುತ್ತವೆ ಎಂಬುದು ನಿಜ. ಆದರೆ ಬಹಳಷ್ಟು ಕೋಡ್ ಆಫ್ ಕಾಂಡಕ್ಟ್‍ಗಳು ಒಂದೇ ರೀತಿ ಇರುತ್ತವೆ. ಬಹಳಷ್ಟು ಕೋಡ್ ಆಫ್ ಕಾಂಡಕ್ಟ್‍ಗಳು ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನುಗಳನ್ನು ಉಲ್ಲೇಖವನ್ನಾಗಿ ಇಟ್ಟುಕೊಳ್ಳುತ್ತವೆ ಮತ್ತು ಕನಿಷ್ಠ ವೇತನ, ಕೆಲಸದ ಗಂಟೆಗಳು, ಸಂಘಟನಾ ಸ್ವಾತಂತ್ರ್ಯ ಹಾಗೂ ಸಾಮೂಹಿಕ ಒಪ್ಪಂದಗಳು, ತಾರತಮ್ಯ ನಿಷೇಧ, ಮಹಿಳಾ ಹಕ್ಕು ಇತ್ಯಾದಿ ಅಂಶಗಳು ಸಾಮಾನ್ಯವಾಗಿರುತ್ತವೆ. ಕಾರ್ಮಿಕರು ಯಾವುದೇ ಅಂತಾರಾಷ್ಟ್ರೀಯ, ರಾಷ್ಟ್ರೀಯ ಅಥವಾ ನಿರ್ದಿಷ್ಟ ಕೋಡ್‍ಗಳ ಉಲ್ಲಂಘನೆಯ ಬಗ್ಗೆ ಕೊಡುವ ದೂರುಗಳು ಸಾಮಾನ್ಯವಾಗಿ ಮಾನ್ಯವಾಗುತ್ತವೆ.

 

WRC ಆಡಳಿತ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

WRC ಯು 18 ಸದಸ್ಯರನ್ನೊಳಗೊಂಡ ನಿರ್ದೇಶಕ ಮಂಡಳಿಯನ್ನು ಹೊಂದಿದೆ. ಈ ಸದಸ್ಯ ಮಂಡಳಿಯಲ್ಲಿ ಯೂನಿವರ್ಸಿಟಿಯ ಆಡಳಿತವರ್ಗದ ಆರು ಪ್ರತಿನಿಧಿಗಳು, ಸ್ಟೂಡೆಂಟ್ ಆರ್ಗನೈಸೇಶನ್ ಅಗೈನೆಸ್ಟ್ ಸ್ವೆಟ್‍ಶಾಪ್ (USAS) ನ ಆರು ಪ್ರತಿನಿಧಿಗಳು ಮತ್ತು ಕಾರ್ಮಿಕರ ಹಕ್ಕುಗಳ ತಜ್ಞರು ಆರು ಮಂದಿ ಇರುತ್ತಾರೆ.

 

WRC ಕೆಲಸಕ್ಕೆ ಹಣಕಾಸು ಹೇಗೆ ವ್ಯವಸ್ಥೆಯಾಗುತ್ತದೆ

WRC ಗೆ 65% ನಷ್ಟು ಭಾಗ ಧನಸಹಾಯ ಯೂನಿವರ್ಸಿಟಿ ಅಫಿಲಿಯೇಶನ್ ಶುಲ್ಕದಿಂದ ಪೂರೈಕೆಯಾಗುತ್ತದೆ. 25% ನಷ್ಟು ಧನಸಹಾಯ ಸಂಸ್ಥೆಗಳಿಂದ ಮತ್ತು ಇನ್ನುಳಿದದ್ದು ವೈಯಕ್ತಿಕ ದಾನಿಗಳು ಮತ್ತು WRC ಯು ಮೇಲ್ವಿಚಾರಣೆ ನಡೆಸುವ ಭಾಗೀದಾರರ ಕಡೆಯಿಂದ ಪೂರೈಕೆಯಾಗುತ್ತದೆ.

 

WRC ಮತ್ತು ಯೂನಿಯನ್‍ಗಳ ನಡುವಿನ ಸಂಬಂಧವೇನು?

WRC ಯು ಕೆಲಸದ ಪರಿಸ್ಥಿತಿಯನ್ನು ತನಿಖೆ ಮಾಡುವ ಒಂದು ಸಂಸ್ಥೆಯೇ ವಿನ: ಅದು ಕಾರ್ಮಿಕರನ್ನು ಪ್ರತಿನಿಧಿಸುವುದಿಲ್ಲ. ಕಾರ್ಮಿಕ ಪ್ರತಿನಿಧಿಯಾದ ಯೂನಿಯನ್ ಅನ್ನು ಕಡ್ಡಾಯವಾಗಿ WRC ಯು ತೆರವುಗೊಳಿಸುವುದಿಲ್ಲ, ತೆರವುಗೊಳಿಸಬಾರದು. ಕಾರ್ಮಿಕರು ತಮ್ಮದೇ ಯೂನಿಯನ್‍ಗಳನ್ನು ರಚಿಸಿಕೊಳ್ಳುವ ಹಕ್ಕು ಮತ್ತು ಆ ಮೂಲಕ ಸಾಮೂಹಿಕ ಚೌಕಾಸಿ ನಡೆಸುವ ಹಕ್ಕನ್ನು WRC ಯು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಕಾರ್ಮಿಕರ ಪರಿಸ್ಥಿತಿಯಲ್ಲಿ ನಿಜವಾದ ಮತ್ತು ದೀರ್ಘಕಾಲೀನ ಬದಲಾವಣೆ ತರಲು ಯೂನಿಯನ್‍ಗಳು ಅತ್ಯಗತ್ಯ ಎಂದು WRC ಯು ಗುರುತಿಸುತ್ತದೆ, ಜೊತೆಗೆ ಕೆಲಸದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಕಾರ್ಮಿಕ ಸಂಘಟನೆಗಳು ಅತ್ಯಂತ ಪ್ರಮುಖ ಮೂಲ ಎಂದು WRC ಯು ನಂಬುತ್ತದೆ. ಪ್ರಪಂಚದ ದಕ್ಷಿಣ ಭಾಗದಲ್ಲಿ ಯೂನಿಯನ್‍ಗಳನ್ನು ಬೆಳೆಸಲು WRC ಮಾಡುವ ಪ್ರಯತ್ನಗಳು ಪರಸ್ಪರ ಪ್ರಯೋಜನಕಾರಿಯಾಗಿವೆ.